ಕಾಬಾಳೆ

 ಏಕದಳ ಬೀಜ ಸಸ್ಯಗಳಲ್ಲಿ ಸೈಟ್ಯಾಮಿನೀ ಎಂಬ ಉಪವರ್ಗದ ಕ್ಯಾನೇಸೀ ಕುಟುಂಬಕ್ಕೆ ಸೇರಿದ ಕ್ಯಾನ ಎಂಬ ಜಾತಿಯ ಲಶುನ ಸಸ್ಯ. ಇದರಲ್ಲಿ ಸುಮಾರು 51 ಪ್ರಭೇದಗಳಿವೆ. ಇದಕ್ಕೆ ಕರಿದಾಳ, ನೀರುಬಾಳೆ ಎಂಬ ಹೆಸರೂ ಇವೆ. ಇದು ಉದ್ಯಾನ ಹಾಗೂ ಕೈತೋಟಗಳಲ್ಲಿ ಬೆಳೆಸಲಾಗುವ ಒಂದು ಬಹು ವಾರ್ಷಿಕ ಸಸ್ಯ. ಇದು ದೊಡ್ಡ ಹಾಗೂ ಎತ್ತರ ಬೆಳೆಯುವ ಒಂದು ಮೂಲಿಕೆ. ಇದರ ಕಾಂಡ ಭೂಮಿಯೊಳಗೇ ಇದ್ದು ಗೆಡ್ಡೆಯಾಗಿ ಮಾರ್ಪಾಡಾಗಿದೆ. ಭೂಮಿಯ ಮೇಲೆ ಕಾಣುವ ತೋರಿಕೆಯ ಕಾಂಡ ಬಾಳೆಯ ಗಿಡದಂತೆ ಅನೇಕ ಎಲೆಗಳ ಬುಡದಿಂದ ಆದುದು. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ. ಇವುಗಳ ಆಕಾರ ದೀರ್ಘ ವೃತ್ತದಂತೆ. ತುದಿ ಮೊನಚು. ಎಲೆಯ ಬುಡಗಳು ಮುಸುಕಿನಂತೆ ಒಂದರ ಮೇಲೊಂದು ಜೋಡಿಸಲ್ಲಟ್ಟಿರುತ್ತವೆ. ಹೂಗಳು ವರ್ಷಪೂರ್ತಿ ಇರುತ್ತದೆ. ಅವುಗಳ ಬಣ್ಣ ಕೆಂಪು, ಹಳದಿ, ಬಿÉಳಿ, ಕಿತ್ತಳೆ, ಗುಲಾಬಿ ಹೀಗೆ ವಿವಿಧ ತಳಿಗಳಲ್ಲಿ ಬೇರೆ ಬೇರೆಯಾಗಿವೆ. ಹೂಗಳು ಗಿಡದ ತುದಿಯಿಂದ ಹೊರ ಬರುವ ಮಧ್ಯಾರಂಭಿ ಹೂಗೊಂಚಲಿನಲ್ಲಿ ಸಾಮಾವೇಶಗೊಂಡಿವೆ. ಹೂಗೊಂಚಲಿನ ಮುಖ್ಯಕಾಂಡದ ಮೇಲೆ ಹಲವಾರು ಗುಣ್ಣುಗಳಿದ್ದು ಒಂದೊಂದರಲ್ಲೂ ಒಂದೊಂದು ಬ್ರಾಕ್ಟ್ ಇದೆ. ಒಂದೊಂದು ಬ್ರಾಕ್ಡಿನ ಕಂಕುಳಲ್ಲೂ ಎರಡು ಬ್ರಾಕ್ಟಿಯೋಲುಗಳಿವೆ. ಪ್ರತಿ ಬ್ರಾಕ್ಟಿಯೋಲಿನ ಕಂಕುಳಲ್ಲಿ ಒಂದೂ ಹೂವಿದೆ. ಪುಷ್ಪಪತ್ರಗಳು 3. ಅವುಗಳು ಬಣ್ಣ ಮಾಸಲು ಹಸಿರು. ಒಂದೊಂದು ಎಸಳಿನ ಆಕಾರ ಅಂಡದಂತೆ. ತುದಿಮೊನಚು. ಪುಷ್ಪದಳಗಳು 3. ಗಾತ್ರದಲ್ಲಿ ಕಿರಿದಾಗಿವೆ. ಅವುಗಳ ತುದಿಯೂ ಮೊನಚು. ದಳ ಮತ್ತು ಹೂವಿನ ಇತರ ಭಾಗಗಳು ಕೂಡಿಕೊಂಡು ಆಗಿರುವ ಬುಡ ಕೊಳವೆಯಂತಿದೆ. ಕೇಸರಹಳ ಒಟ್ಟು ಸಂಖ್ಯೆ 5. ಆದರೆ ಅವುಗಳಲ್ಲಿ 4 ಬರಡು ಕೇಸರಗಳು. ಇವುಗಳಲ್ಲಿ 3 ಕೇಸರಗಳು ಕೆಂಪು ಅಥವಾ ಹಳದಿ ಬಣ್ಣವಾಗಿ ದಳಗಳಂತೆ ಕಾಣುತ್ತವೆ. ನಾಲ್ಕನೆಯದು ನಾಲಗೆಯಂತೆ ಇದೆ. ಇದರ ಮೇಲೆ ಕೆಂಪು ಮತ್ತು ಹಳದಿ ಬಣ್ಣದ ಚುಕ್ಕೆಗಳಿವೆ. ಇದನ್ನು ಲೇಬೆಲ್ಲಮ್ ಎಂದು ಕರೆಯಲಾಗುತ್ತದೆ. ಐದನೆಯ ಕೇಸರವೂ ದಳದಂತೆಯೇ ಇದೆ. ಇದರಲ್ಲಿ ಮಾತ್ರ ತುದಿಯಲ್ಲಿ ಅರ್ಧ ಪರಾಗಕೋಶವಿದೆ. ಅಂಡಾಶಯ ನೀಚಸ್ಥಾನದ್ದು. ಅದರಲ್ಲಿ 3 ಕೋಣೆಗಳಿವೆ. ಶಲಾಕೆ ಚಪ್ಪಟೆಯಾಗಿ ದಳದಂತೆಯೇ ವರ್ಣಮಯವಾಗಿದೆ. ಶಲಾಕಾಗ್ರ ಕಿರಿದು. ಓರೆಯಾಗಿ ಬಾಗಿದೆ. ಕಾಯಿಗೆ ಡಿಪ್ಲೊಟೀಜಿಯ ಎಂದು ಹೆಸರು. ಇದು 3 ಭಾಗಗಳಿಂದ ಕೂಡಿದೆ. ಮೇಲೆಲ್ಲ ಸಣ್ಣ ಸಣ್ಣ ಮುಳ್ಳುಗಳಿವೆ. ಬೀಜಗಳು ಅಸಂಖ್ಯ. ಇವು ಅತಿ ಬಿರುಸು, ದುಂಡು ಮತ್ತು ಕಪ್ಪು ಬಣ್ಣದವು.

 ಶುಂಠಿಯಂತಿರುವ ಅದರ ಗೆಡ್ಡೆಗಳಿಂದಲೇ ಕಾಬಾಳೆಯನ್ನು ವೃದ್ಧಿಸುವುದು ವಾಡಿಕೆ; ವರ್ಷದ ಎಲ್ಲ ಕಾಲದಲ್ಲಿ ಬೆಳೆಯುವುದಾದರೂ ಚಳಿಗಾಲದ ಅನಂತರ ಫೆಬ್ರವರಿಯಿಂದ ಏಪ್ರಿಲ್ ತಿಂಗಳ ವರೆಗೆ ಅದಕ್ಕೆ ಬಿಡುವ ಕೊಡುವುದು ಒಳಿತು. ಮಳೆಗಾಲ ಪ್ರಾರಂಭವಾದೊಡನೆ ಗೆಡ್ಡೆಗಳನ್ನು ಹೊರ ತೆಗೆದು ಮತ್ತೆ ಹೊಸ ಮಡಿಗಳಲ್ಲಿ ಊರ ಬೇಕು. ಯಥೇಚ್ಛವಾಗಿ ನೀರು ಮತ್ತು ಗೊಬ್ಬರ ಕೊಡಬೇಕು.

 ಹಲವು ವೈದ್ಯಕೀಯ ಗುಣವಿಶೇಷಗಳಿರುವ ಕಾಬಾಳೆಯ ಬೇರುಗಳು ಜ್ವರ, ಜಲೋದರ ಇತ್ಯಾದಿ ಹಲವಾರು ರೋಗಗಳಿಗೆ ಉಪಯುಕ್ತ. ಕಾಂಡದ ದುಂಟುಗಳನ್ನು ಚೂರು ಚೂರೂ ಮಾಡಿ, ಅನ್ನದ ಗಂಜಿಯಲ್ಲಿ ಮೆಣಸಿನೊಡನೆ ಕುಡಿಸಿ, ವಿಷಯುಕ್ತವಾದ ಹುಲ್ಲನ್ನು ಮೇಯ್ದ ದನಗಳಿಗೆ ಪ್ರತಿವಿಷಹಾರಿ ಔಷದವಾಗಿ ಕೊಡುವುದುಂಟು. ಕೆಲವು ಪ್ರಭೇದಗಳ ಗುಪ್ತಕಾಂಡಗಳಲ್ಲಿಪಿಷ್ಟ ಹೇರಳವಾಗಿರುವುದರಿಂದ ಅವನ್ನು ಆಹಾರವಾಗಿ ಬಳಸುವುದುಂಟು.

 ಉದ್ಯಾನಪ್ರಾಮುಖ್ಯ ಪಡೆದಿರುವ ಹಲವಾರು ಪ್ರಭೇದಗಳಲ್ಲಿ ಮುಖ್ಯವಾದವು ಇವು: 1 ಪೆರು ದೇಶದ ಮೂಲವಾಸಿಯಾದ ಕ್ಯಾನ ಇಂಡಿಫ್ಲೋರಯೆಂಬುದು 8'-10' ಎತ್ತರಕ್ಕೆ ಬೆಳೆಯುತ್ತದೆ. ಹೂಗಳ ಬಣ್ಣ ಗುಲಾಬಿ. 2 ಕ್ಯಾ. ವಾಸ್ರ್ಕವಿಕ್ಸಿಯೈ. ಕಾಸ್ಟರೀಕ ಮತ್ತು ಬ್ರೆಜಿóಲ್‍ಗಳ ನಿವಾಸಿ. 3'-4' ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳಿಗೆ ಕೊಂಚ ಕಂಚಿನ ಬಣ್ಣ ಇದೆ. ಹೂಗಳು ಕಡುಕೆಂಪು. 3 ಕ್ಯಾ. ಪ್ಯಾನಿ ಕ್ಯುಲೇಟ ಯಂಬುದು ದಕ್ಷಿಣ ಅಮೆರಿಕದ ಆಂಡಿಸ್ ಪರ್ವತಗಳ ಮೂಲವಾಸಿ. ಹೂಗಳು ಹಳದಿಮಿಶ್ರಿತ ಹಸಿರು ಬಣ್ಣದವು 4 ಕ್ಯಾ. ಕಾಂಪ್ಯಾಕ್ಟ್. ಇದೂ ದಕ್ಷಿಣ ಅಮೆರಿಕದ ನಿವಾಸಿಯೇ. ಹೂದಳಗಳು ಹಳದಿಮಿಶ್ರಿತ ಕೆಂಪು ಬಣ್ಣದವು. ಬರಡು ಕೇಸರಗಳು ಕಿತ್ತಳೆ ಅಥವಾ ಕಡುಕೆಂಪು ಬಣ್ಣದವು. 4 ಕ್ಯಾ. ಎಡ್ಯುಲಿಸ್ 8'-12' ಎತ್ತರಕ್ಕೆ ಬೆಳೆಯುವ ಪ್ರಭೇದ ಇದು. ಹೂಗಳ ಬಣ್ಣ ಕಗ್ಗಂಪು. ಬರಡು ಕೇಸರಗಳು ಕಿತ್ತಳೆ ಬಣ್ಣದವು. ಇದರ ತವರು ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಅಮೆರಿಕ. 5 ಕ್ಯಾ. ಪ್ಯಾಲಿಡ. ಹಸಿರು ಮಿಶ್ರಿತ ಗಂಧಕ ಹಳದಿಬಣ್ಣದ ಹೂ ಬಿಡುವ ಪ್ರಭೇದ. 6 ಕ್ಯಾ. ಇಂಡಿಕ. 3'-5' ಎತ್ತರಕ್ಕೆ ಬೆಳೆಯುವ ಪ್ರಭೇದ ವೆಸ್À್ಟ ಇಂಡೀಸ್ ಮಧ್ಯ ಹಾಗೂ ದಕ್ಷಿಣ ಅಮೆರಿಕಗಳಲ್ಲಿ ಬಲು ಸಾಮಾನ್ಯ. ಭಾರತದಲ್ಲೂ ಬೆಳೆಯುತ್ತದೆ. ಹೂದಳಗಳು ತಿಳಿಹಸಿರು ಬಣ್ಣದವು. ಬರಡು ಕೇಸರಗಳು ಪ್ರಕಾಶಯುಕ್ತ ಕೆಂಪು ಬಣ್ಣದವು. ಇವನ್ನು ಇಂಗ್ಲಿಷಿನಲ್ಲಿ ಇಂಡಿಯನ್ ಶಾಟ್ ಎನ್ನುತ್ತಾರೆ. ಮೇಲೆ ತಿಳಿಸಿದ ಪ್ರಭೇದಗಳನ್ನು ಅಡ್ಡತಳಿಯೆಬ್ಬಿಕೆಯಿಂದ ಪಡೆದ ಹಲವಾರು ತಳಿಗಳಿವೆ. ಇವನ್ನು ಎತ್ತರವಾದವು, ಕುಳ್ಳುತಳಿಗಳು ಎಂದು ಎರಡು ಮುಖ್ಯ ಬಗೆಗಳಾಗಿ ವಿಂಗಡಿಸಬಹುದು. ಎತ್ತರ ತಳಿಗಳಲ್ಲಿ ಬಿಳಿಯ ಬಣ್ಣದ ಹೂ ಬಿಡುವ ವೈಟ್‍ಕ್ವೀನ್, ಹಳದಿಬಣ್ಣದ ಹೂಗಳುಳ್ಳ ಅರೋರ ಬೋರಿಯಾಲಿಸ್, ಕ್ಯಾನರಿ ಬರ್ಡ್, ಮಾಸ್ಟರ್‍ಪೀಸ್, ಕಿತ್ತಳೆ ಬಣ್ಣದ ಹೂವಿನ ಅಮೆರಿಕನ್ ಬ್ಯೂಟಿ, ವ್ಯೋಮಿಂಗ್ ಮುಂತಾದವು, ನಸುಗೆಂಪು ಬಣ್ಣದ ಹೂಗಳುಳ್ಳ ಆಲಿಪೂರ್ ಬ್ಯಾಟಿ, ಡೂಪಾಂಟ್, ಪ್ರಿನ್ಸ್ ಆಫ್ ವೇಲ್ಸ್, ಏಪ್ರಿಕಾಟ್ ಕಿಂಗ್, ಕ್ಲಿಯೋಪಾತ್ರ, ದಿ ಅಂಬಾಸಿಡರ್, ಸ್ಟ್ಯಾಚ್ಯೂ ಆಫ್ ಲಿಬರ್ಟಿ ಮೊದಲಾದುವು ಮುಖ್ಯವಾದುವು. ಕುಳ್ಳು, ತಳಿಗಳಲ್ಲಿ ಕಿತ್ತಳೆ ಬಣ್ಣದ ಹೂವಿನ ತಳಿಗಳಾದ ಆರೆಂಜ್ ಗ್ಲೋರಿ, ಆರೆಂಜ್ ಪ್ಲಮ್, ಕಡುಗೆಂಪು ಬಣ್ಣದ ಹೂವಿನ ಹಂಗೇರಿಯ ಸೆಂಟಿನಿಯರೆ ರೋಸಿನ್ ಮತ್ತು ಹಳದಿ ಬಣ್ಣದ ಹೂಗಳುಳ್ಳ ಸ್ಟಾರ್‍ಡಸ್ಟ್, ಏಪ್ರಿಕಾಟ್ ಮುಖ್ಯವಾದವು.

 

 (ಎಂ.ಎಸ್.ಆರ್.; ಎಂ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ